ವಾಲೇರಾ, ಜುವಾನ್
	1824-1905. ಸ್ಪ್ಯಾನಿಷ್ ಕಾದಂಬರಿಕಾರ ಮತ್ತು ಕಾವ್ಯ ವಿಮರ್ಶಕ. ಈತ 1824ರಲ್ಲಿ ಜನಿಸಿದ. ಇವನ ಕಾದಂಬರಿಗಳಲ್ಲಿ ಲೇಖಕನ ಲೌಕಿಕ ಜ್ಞಾನವೂ ತತ್ತ್ವಜಿಜ್ಞಾಸೆಯ ಆಸಕ್ತಿಯೂ ಎದ್ದು ಕಾಣುತ್ತವೆ. ಪೇಪೀಟಾ ಹಿಮೇನೆದ್ ಮತ್ತು ಡೋನ್ಯಾಲೂಸ್, ಕೋಮೆಂಡಡೋರ್, ಮೆಂಡೋಸಾ ಇವನ ಮೂರು ಕಾದಂಬರಿಗಳು. ಮತಶ್ರದ್ಧೆಯಲ್ಲಿ ಮುಳುಗಿದ್ದು, ಪಾದ್ರಿ ವೃತ್ತಿಯನ್ನು ಕೈಕೊಳ್ಳಲು ಸಿದ್ಧನಾಗಿದ್ದ ನಾಯಕ ಪೇಪೀಟಾ, ಅನುರಕ್ತನಾಗಿ ತನ್ನ ಮತಶ್ರದ್ಧೆಯು ತನ್ನ ಅಹಂಕಾರದ ಪ್ರತಿಬಿಂಬವಲ್ಲದೆ ಬೇರೆಯಲ್ಲವೆಂಬ ತಿಳಿವಳಿಕೆ ಪಡೆಯುವುದು ಪೇಪೀಟಾ ಹಿಮೇನೆದ್ ಕಾದಂಬರಿಯ ವಸ್ತು. ಡೋನ್ಯಾಲೂಸ್‍ನಲ್ಲಿ ಒಬ್ಬ ಪಾದ್ರಿ ಅನುರಕ್ತನಾಗುವನು. ಕಥೆಯಲ್ಲಿ ಈತ ತನ್ನ ಮಧುರ ಭಾವಗಳನ್ನು ಅದುಮಿಕೊಳ್ಳಲು ಯತ್ನಿಸುವ ಚಿತ್ರಣದಲ್ಲಿ ಮನೋವಿಶ್ಲೇಷಣೆಯ ಸ್ವಾರಸ್ಯವಿದೆ. ಕೋಮೆಂಡಡೋರ್ ಮೆಂಡೋಸಾ ಎಂಬ ಕಾದಂಬರಿಯಲ್ಲಿ ಯುವತಿಯೊಬ್ಬಳು ಅಪರವಯಸ್ಕನನ್ನು ಮದುವೆಯಾಗಿ ಸುಖವಾಗಿರಲು ಸಾಧ್ಯವೇ ಎಂಬ ಪ್ರಶ್ನೆಯೂ ಅಕ್ರಮ ಸಂತಾನದ ಸಮಸ್ಯೆಯೂ ವಿಮರ್ಶಿತವಾಗಿವೆ. ಈತ 1905ರಲ್ಲಿ ನಿಧನನಾದ.
													*